ಬರ್ಬಟ್ -
ಗ್ಯಾಡಿಡೀ ಕುಟುಂಬಕ್ಕೆ ಸೇರಿದ ಮೀನು. ಲೋಟ ಲೋಟ ಇದರ ವೈಜ್ಞಾನಿಕ ಹೆಸರು ಇದು ನಿಷ್ಕøಷ್ಟವಾಗಿ ಒಳನಾಡಿನ ಆಳವಾದ ಜಲಾಶಾಯಗಳಲ್ಲಿ ವಾಸಿಸುವ ಕಾಡ್ ಮೀನಿನ ಜಾತಿಗೆ ಸೇರಿದ ಏಕೈಕ ಮೀನು. ಇದು ಉತ್ತರ ಅಮೆರಿಕ, ಮಧ್ಯ ಮತ್ತು ಉತ್ತರ ಯೂರೊಪಿನ ಒಳನಾಡ ನೀರಿನಲ್ಲಿ ಕಾಣದೊರೆಯುತ್ತದೆ. ಕೆಳದವಡೆಯಲ್ಲಿ ಒಂದೇ ಒಂದು ಸ್ಪರ್ಶಾಂಗವೂ ಗಂಟಲಿನ ಭಾಗದಲ್ಲಿ ಸಣ್ಣ ಕಿಬ್ಬೊಟ್ಟೆಯ ಎರಡು ಈಜು ರೆಕ್ಕೆಗಳೂ ಇರುವುದು ಈ ಮೀನಿನ ವೈಶಿಷ್ಟ್ಯ. ಇದರ ಉದ್ದ ಸುಮಾರು 1.5, ತೂಕ ಸುಮಾರು 4 ಕೆಜಿ.

ಬರ್ಬಟ್ ಮೀನು ನಿಶಾಚರಿ, ನೀರಿನಲ್ಲಿರುವ ಹುಳುಗಳು, ಇತರ ಮೀನು ಮರಿಗಳು ಮತ್ತು ಕಪ್ಪೆಗಳು ಇದರ ಪ್ರಧಾನ ಆಹಾರ. ಚಳಿಗಾಲದಲ್ಲಿ ಆಳವಿಲ್ಲದ ನೀರಿನಲ್ಲಿ ಅಥವಾ ಸಣ್ಣ ಝರಿಗಳಲ್ಲಿ ಮೊಟ್ಟೆ ಇಟ್ಟು ಮರಿಮಾಡುತ್ತದೆ. ಸಾಮಾನ್ಯವಾಗಿ ಈ ಮೀನು ಹಗಲಿನಲ್ಲಿ ಬಂಡೆಗಳ ಸಂದಿಗಳಲ್ಲಿ, ಗಿಡಗಳ ಮಧ್ಯದಲ್ಲಿ ಅವಿತು ಕೊಂಡಿದ್ದು ರಾತ್ರಿ ವೇಳೆಯಲ್ಲಿ ಮಾತ್ರ ಹೊರಕ್ಕೆ ಬರುವುದರಿಂದ ಬೇರೆ ಮೀನುಗಳಷ್ಟು ಪ್ರಸಿದ್ಧವಾಗಿಲ್ಲ.
(ಕೆ.ವಿ.ಡಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ